ಕನ್ನಡ ಭಾಷಾ ಬೋಧನೆಯಲ್ಲಿ ದಕ್ಷತೆ ಹೆಚ್ಚಲಿ
Share on
ಕನ್ನಡವು ಒಂದು ದ್ರಾವಿಡ ಭಾಷೆಯಾಗಿದೆ. ಕನ್ನಡ ಲಿಪಿ ಸುಮಾರು ೧೫೦೦-೧೬೦೦ ವರ್ಷಗಳಿಗಿಂತಲೂ ಹಿಂದಿನದು. ಕನ್ನಡ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಕರೆಯುತ್ತಾರೆ. ಕನ್ನಡ ಭಾಷೆಯು ಆಲಿಸಲು, ಬರೆಯಲು, ಮಾತನಾಡಲು ತುಂಬಾ ಸೊಗಸಾದ ಭಾಷೆಯಾಗಿದೆ. ಕನ್ನಡ ಭಾಷೆಯ ಬೋಧನೆಯನ್ನು ಪರಿಣಾಮಕಾರಿಯಾಗಿಸುವ ದೃಷ್ಟಿಯಲ್ಲಿ ಹೊಸ ಆಲೋಚನೆಗಳ ಅವಶ್ಯಕತೆ ಇದೆ.
ಭಾಷಾ ಪಠ್ಯದ ಕಲಿಕೆಯೂ ಭಾಷಾ ಕೌಶಲ್ಯಗಳಿಗೆ ಆದ್ಯತೆ ನೀಡಬೇಕು. ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಗೆ ಅಳವಡಿಸಿದಂತೆಲ್ಲ ಮಕ್ಕಳಿಗೆ ಕಲಿಕಾಂಶಗಳು ಅವರ ಅನುಭವಕ್ಕೆ ಹತ್ತಿರವಾಗಿರಬೇಕು. ಆಗ ಕಲಿಕಾ ದಕ್ಷತೆ ಹೆಚ್ಚುತ್ತದೆ. ಕನ್ನಡ ಭಾಷಾ ಬೋಧನೆಗೆ ಸ್ಥಳೀಯ ಕಥೆ, ಹಾಡು, ಲಾವಣಿ, ಸ್ಥಳ, ಪುರಾಣ, ಐತಿಹ್ಯ, ನಂಬಿಕೆ, ಕಲೆ, ವೃತ್ತಿಗಳಂತ ಪರಿಕರಗಳ ಬಳಕೆಯನ್ನು ಹೆಚ್ಚಿಸಬೇಕು. ಕನ್ನಡ ಭಾಷಾ ಕಲಿಕೆಯು ಮಕ್ಕಳಿಗೆ ಅವರ ಪರಿಸರದ ಅನುಭವಗಳೇ ಪಠ್ಯವಾಗಿ ದೊರೆತಂತೆ ಭಾಸವಾಗಬೇಕು. ಭಾಷಾ ಕೌಶಲ್ಯಗಳ ಅರಿವು ಭಾಷೆಯ ವಿಕಾಸಕ್ಕೆ ಸಹಾಯಕವಾಗಿದೆ. ಪರೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳು ಪಠ್ಯ ಪುಸ್ತಕ ವಿಚಾರಗಳನ್ನು ಉತ್ತರವಾಗಿ ಬಯಸುವಂತಹ ಪ್ರಶ್ನೆಗಳಾಗಿರಬಾರದು. ಬದಲಿಗೆ ಪಠ್ಯ ವಿಚಾರಗಳಲ್ಲಿರುವ ಭಾಷಾ ಕೌಶಲ್ಯಗಳನ್ನು ಉತ್ತರವಾಗಿ ಬಯಸುವ ಪ್ರಶ್ನೆಗಳಾಗಿರಬೇಕು. ಜೀವನದ ಮೌಲ್ಯಗಳನ್ನು ಅರಿಯುವಂತೆ, ಕಷ್ಟ ಬಂದಾಗ ಅದನ್ನು ಪರಿಹರಿಸುವ ವಿಧಾನವನ್ನು ತಿಳಿಯುವ ರೀತಿ ಪಾಠಗಳನ್ನು ಅಳವಡಿಸಬೇಕು.
ಶಿಕ್ಷಣದ ಉದ್ದೇಶವು ಹೆಚ್ಚು ಔದ್ಯೋಗಿಕ ರೂಪವಾಗುತ್ತ ಹೋದಂತೆ ಯಾವುದೇ ಭಾಷೆಯ ಜ್ಞಾನ ಕಡಿಮೆಯಾಗುತ್ತ ಹೋಗುತ್ತದೆ. ಭಾಷಾ ಕೌಶಲ್ಯಗಳ ಕೊರತೆ ಇಂದಿನ ಶೈಕ್ಷಣಿಕ ಸನ್ನಿವೇಶದ ಸಾಮಾನ್ಯ ಲಕ್ಷಣವಾಗಿದೆ. ಭಾಷಾ ಜ್ಞಾನದ ಕೊರತೆಯು ಹೆಚ್ಚು ಜ್ಞಾನ ಗಳಿಸಲು ಇರುವ ಸಾಧ್ಯತೆಗಳನ್ನು ಕ್ರಮೇಣ ಕಡಿಮೆಗೊಳಿಸುತ್ತದೆ. ಕಲಿಕಾನುಭವಗಳನ್ನು ಕುಗ್ಗಿಸುತ್ತದೆ. ಆದಕಾರಣ, ಭಾಷಾ ವಿಕಾಸದ ಪ್ರಾಥಮಿಕ ನೆಲೆಯಾದ ಮಾತೃಭಾಷೆಯ ಕಲಿಕೆಯ ದಕ್ಷತೆಯನ್ನು ಹೆಚ್ಚಿಸಲು ಆದ್ಯತೆ ನೀಡಲೇಬೇಕಾಗಿದೆ.
Poornima B M
Kannada Faculty
National Public School NORTH